ರಾಮನಾಥನ್, ಎಂ ಡಿ 1923-84. ಭಾರತದ ಪ್ರಸಿದ್ಧ ಸಂಗೀತ ವಿದ್ವಾಂಸರು ಹಾಗೂ ವಾಗ್ಗೇಯಕಾರರು. ಕೇರಳ ರಾಜ್ಯದ ಫಾಲ್‍ಘಾಟ್ ಸಮೀಪದ ಮಂಜಪರ ಎಂಬ ಊರಿನಲ್ಲಿ ಜನನ (20 ಮೇ 1923). ತಂದೆ ದೇವೇಶ ಭಾಗವತರ್; ಖ್ಯಾತ ಸಂಗೀತ ವಿದ್ವಾಂಸರಾಗಿದ್ದರು. ಇವರ ಏಕಮಾತ್ರ ಪುತ್ರ ರಾಮನಾಥನ್, ಪ್ರಾರಂಭದಲ್ಲಿ ತಂದೆಯಿಂದಲೇ ಸಂಗೀತ ಶಿಕ್ಷಣ ಪಡೆದುಕೊಂಡರು. ಮಂಜಪರ ಮತ್ತು ಫಾಲ್ಘಾಟಿನ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ ಫಾಲ್ಘಾಟಿನ ವಿಕ್ಟೋರಿಯ ಕಾಲೇಜಿನಲ್ಲಿ ಓದಿ ಬಿ.ಎಸ್‍ಸಿ. ಪದವಿ ಗಳಿಸಿದರು. ತಮ್ಮ ಪ್ರೌಢ ವಿದ್ಯಾಭ್ಯಾಸವನ್ನು ಮುಂದುವರಿಸಿ ಎಂಜಿನಿಯರಿಂಗ್ ಪದವಿ ಪಡೆದರು. ಆಗಿನ ಕಾಲಕ್ಕೆ ಸಂಗೀತದ ಮಹಾಮೇಧಾವಿ ಎನಿಸಿದ್ದ ಟೈಗರ್ ವರದಾಚಾರ್ (1876-1950) ಎಂಬವರು ಅಡ್ಯಾರಿನ ಕಲಾಕ್ಷೇತ್ರದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಸಮಯದಲ್ಲಿ ರಾಮನಾಥನ್ ಅಲ್ಲಿ ಸಂಗೀತ ಶಿರೋಮಣಿ ಶಿಕ್ಷಣದ ತರಗತಿಗೆ ಸೇರಿ ಉತ್ತಮ ದರ್ಜೆಯ ತೇರ್ಗಡೆಯಾದರು. ಹೀಗಾಗಿ ವರದಾಚಾರ್ಯರಿಗೆ ರಾಮನಾಥನ್ ಅವರ ಮೇಲೆ ಅಪಾರ ಪ್ರೇಮ, ಅಭಿಮಾನಗಳು ಉಂಟಾದವು. ಗುರುಗಳ ಹಾಡಿನ ಪರಿಯನ್ನು ಬಲು ಚೆನ್ನಾಗಿ ಅನುಸರಿಸುತ್ತಿದ್ದರು ರಾಮನಾಥನ್.
ಕ್ರಮೇಣ ರಾಮನಾಥನ್ ಕಲಾಕ್ಷೇತ್ರದ ಸಂಗೀತ ಕಾಲೇಜಿನಲ್ಲಿ ಸಂಗೀತದ ಪ್ರಾಧ್ಯಾಪಕರಾಗಿಯೂ ಅದರ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು. ಇವರ ಸಂಗೀತಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು (1974). ಸಂಗೀತ ನಾಟಕ ಅಕೆಡೆಮಿ ತನ್ನ ಪ್ರಶಸ್ತಿಯನ್ನು 1975ರಲ್ಲೂ ಮದರಾಸಿನ ಫೈನ್ ಆಟ್ರ್ಸ್ ಸೊಸೈಟಿ ತನ್ನ ಸಂಗೀತ ಕಲಾ ಶಿಖಾಮಣಿ ಪ್ರಶಸ್ತಿಯನ್ನು 1976ರಲ್ಲೂ ನೀಡಿ ಗೌರವಿಸಿದುವು.

ರಾಮನಾಥನ್ ಅವರು ವಾಗ್ಗೇಯಕಾರರಾಗಿ 300ಕ್ಕೂ ಹೆಚ್ಚಿನ ಸಂಗೀತ ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲವೂ ಆಶುರಚನೆಗಳಾಗಿವೆ. ಪವಿತ್ರ ಕ್ಷೇತ್ರಗಳನ್ನೂ ದೇವಾಲಯಗಳನ್ನೂ ಸಂದರ್ಶಿಸಿದಾಗ ಇಂಥ ರಚನೆಗಳು ಮೂಡಿಬರುತ್ತಿದ್ದುವೆಂದು ಹೇಳಲಾಗಿದೆ.

ರಾಮನಾಥನ್ ಅವರದು ವಿಶಿಷ್ಟ ಸಂಗೀತಶೈಲಿ. ಘನವೆಂದೆನಿಸುವ, ಮಂದಶ್ರುತಿಯ, ಸ್ಪಂದನಶೀಲ ಶಾರೀರ ಇವರದು. ಟೈಗರ್ ವರದಾಚಾರ್ಯರ ಶೈಲಿಯ ಪ್ರಭಾವವಿದ್ದರೂ ತಮ್ಮದೇ ಆದ ಮಧ್ಯಮಕಾಲದ ಗಾಯನ ಶೈಲಿಯನ್ನು ರೂಢಿಸಿಕೊಂಡಿದ್ದರು. ಇದರ ಜೊತೆಗೆ ವಿಳಂಬ ಕಾಲದ ಸಂಗೀತರಚನೆಗಳನ್ನು ಆರಿಸಿಕೊಂಡು ತಮ್ಮ ಪ್ರತಿಭಾವೈಶಿಷ್ಟ್ಯವನ್ನು ಪ್ರದರ್ಶಿಸುತ್ತಿದ್ದರು. ಶಾಂತಚಿತ್ತತೆ, ಸೌಮ್ಯತೆ, ಪ್ರಸನ್ನತೆ-ಈ ಮೂರು ಇವರ ಸಂಗೀತಶೈಲಿಯ ಪ್ರಮುಖ ಲಕ್ಷಣಗಳಾಗಿದ್ದುವು. ಗಾಯಕನ ಸೃಜನಶೀಲತೆಯ ಲಕ್ಷಣಗಳು ಇವರ ಗಾಯನದಲ್ಲಿ ಎದ್ದು ಕಾಣುತ್ತಿದ್ದವು. ಸರಳವೆನಿಸುವ ಉತ್ಸವ ಸಂಪ್ರದಾಯದ ಕೀರ್ತನೆಗಳನ್ನಾಗಲಿ ಸಂಗೀತ ಕಚೇರಿಯ ಮುಕ್ತಾಯದ ಮಂಗಳವನ್ನಾಗಲಿ ಹಾಡುವಾಗ ತಮ್ಮ ವಿನೂತನ ವೈಶಿಷ್ಟ್ಯವನ್ನು ಪ್ರದರ್ಶಿಸುತ್ತಿದ್ದರು.
ರಾಮನಾಥನ್ ತಮ್ಮ ತಾರುಣ್ಯದಲ್ಲೇ ವಿವಾಹಿತರಾದರು. ಇವರಿಗೆ ಸಂತಾನವಿರಲಿಲ್ಲವಾದ ಕಾರಣ ತಮ್ಮ ತಂಗಿಯ ಮಗನನ್ನೇ ದತ್ತು ತೆಗೆದುಕೊಂಡಿದ್ದರು. ಇವರು 1984 ಏಪ್ರಿಲ್ 27ರಂದು ನಿಧನರಾದರು. 		   

(ಆರ್.ಎನ್.ಎಸ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ